ಒಂದು ಊರಿನ ಹಾಡು
ರಚನೆ : ರೋಹಿಣಿ ಶೇಖರ್
----------------------------------
ಭರತಖಂಡದ ದಕ್ಷಿಣದಲಿ ನಲಿಯುತಿಹ ಕರುನಾಡ ದೇಶದೊಳ್। ಇರುವ ಬೆಂದಕಾಳೂರಿನ ಕಥೆಯ ನಾನು ಪೇಳ್ವೆನು॥ ಕೆಂಪೆೇಗೌಡ ಹೆಸರಿಟ್ಟ ಊರಿದು,ತಂಪು ಹವೆಗೆ ಹೆಸರಾದ ಊರಿದು। ಆದರ ಆತಿಥ್ಯಗಳಿಗೆ ಹೆಸರು ಮಾಡಿದ ಊರಿದು॥ ಊರ ಕದವನು ತೆರೆದು ಇಟ್ಟು, ಬಂದವರಿಗೆ ಸತ್ಕಾರ ಕೊಟ್ಟು। ತನ್ನವರನೆ ಮರೆತುಬಿಟ್ಟು ಮೆರೆಯುತಿರುವ ಊರಿದು॥ ಭೈಯ್ಯ ಆವೋ, ತಂಬಿ ವಾಂಗೋ,ಅನ್ನಯ್ಯ- ರಾಂಡಿ, ಎಂದು ಕರೆಯುತ । ಎಲ್ಲರನು ಎದೆಗಪ್ಪಿಕೊಳ್ಳುವ ಹೃದಯವಂತರ ಊರಿದು॥ ತನ್ನ ಅನ್ನವ ಹಂಚಿ ತಿಂದು, ತನ್ನ ನೆಲಜಲ ಹಂಚಿಕೊಂಡು। ತನ್ನತನವನೇ ಮರೆತುಬಿಟ್ಟ ಕನ್ನಡಿಗರ ಊರಿದು॥ ಒಂದು ಬಿನ್ನಹ ಊರೇ ಕೇಳು ತೊರೆಯದಿರು ನೀ ಕನ್ನಡಮ್ಮನ। ಮರೆಯದಿರು ನೀನವಳ ಋಣವ, ಸಲಹುತಾ ನೀ ಪೋಷಿಸು॥ ಕನ್ನಡವೆ ನಮ್ಮ ತಾಯಿ ತಂದೆ, ಕನ್ನಡವೆ ನಮ್ಮ ಬಂಧು ಬಳಗ। ಕನ್ನಡವನೆ ಮರೆತು ಬಿಟ್ಟರೆ ವ್ಯರ್ಥ ನಮ್ಮೀ ಜನ್ಮವು ॥
----------------------------------
ನೋಂದಣಿ ಐಡಿ : KPFS2-2148