ನನ್ನವ್ವ
ರಚನೆ : ಯಶೋದಮ್ಮ ಎಂಬಿ
----------------------------------
ತವರೂರ ಮನೆಯಲ್ಲಿ ತಾಯಿಯ ಸುಳಿವಿಲ್ಲ ಬಾ ಎಂದು ಕರೆಯುವ ಕರುಳಿಲ್ಲ/ತವರಲಿ ಕಣ್ಣೀರ ಒರೆಸುವ ಕರವಿಲ್ಲ// ಕರುಣೆಯ ಒಡಲಿಲ್ಲ ಮರುಗುವ ಮನವಿಲ್ಲ ಕೊರಗನಾಲಿಸುವ ಕರುಳಿಲ್ಲ/ತವರಲಿ ಕೂರಿಸಿ ಉಣ ಬಡಿಸೊ ಕರವಿಲ್ಲ// ನೀತಿಯ ಕಲಿಸಿದಾಕಿ ಗೀತೆಯ ಬೋಧಿಸಿದಾಕಿ ಪ್ರೀತಿಯ ಕೈ ತುತ್ತು ತಿನಿಸಿದಾಕಿ/ನನ್ನವ್ವ ಸತಿ ಸಾವಿತ್ರಯಂತೆ ಬಾಳಿದಾಕಿ// ಉಪವಾಸ ಇದ್ದಾಕಿ ಜಪ ತಪ ಮಾಡಿದಾಕಿ ಉಪ್ಪರಿಗೆಲಿ ಮಕ್ಕಳ ಬೆಳೆಸಿದಾಕಿ/ನನ್ನವ್ವ ಮುಪ್ಪಾಲು ಒಪ್ಪವಾಗಿ ಬದುಕಿದಾಕಿ// ಗೋವಿನ ಗುಣದಾಕಿ ಹೂವಿನ ಮನದಾಕಿ ನೋವನು ದೂರ ಮಾಡಿದಾಕಿ/ನನ್ನವ್ವ ಜೀವನ ಪಯಣ ಮುಗಿಸಿದಾಕಿ//
----------------------------------
ನೋಂದಣಿ ಐಡಿ : KPFS2-6609