ಗತಿಹೀನ ಪಯಣ
ರಚನೆ : ಅಭಿ ಗುಡ್ಡಮ್ಮಾಡಿ
----------------------------------
ಕಾಲಸ್ರೋತದಲಿ ತೇಲುವ ದಿಕ್ಕಿಲ್ಲದ ನಿರ್ಜೀವ ಕಾಷ್ಠ, ಅರ್ಥಹೀನ ಆಲಾಪನೆಯಲಿ ಮೌನವಾಗಿದೆ ಬದುಕಿನ ಮಂದ್ರನಾದ. ಗಮ್ಯದ ಹಂಗಿಲ್ಲದೆ ಸಾಗಿದೆ ಗುರಿ ಕಾಣದ ಈ ನಿಗೂಢ ಯೋಗ, ಪ್ರಶ್ನೆಗಳೇ ಸಮಾಧಿಯಾಗಿ ಸ್ತಬ್ಧವಾಗಿದೆ ಅಂತರಾಳದ ರಾಗ. ಯಾಂತ್ರಿಕತೆಯ ಸುಳಿಯಲಿ ವಿಸರ್ಜನೆಯಾಗಿದೆ ಅಸ್ಮಿತೆಯ ಸತ್ವ, ಜ್ಞಾನದ ತೃಷೆ ನೀಗುವ ಸದ್ಗ್ರಂಥಗಳು ಸರಿದು ಆವರಿಸಿದೆ ತಿಮಿರ. ಕುತೂಹಲದ ಕಿಡಿ ನಂದಿ ಕವಿದಿದೆ ಬೌದ್ಧಿಕ ಜಾಡ್ಯದ ಭಾರ. ತುಕ್ಕು ಹಿಡಿದ ಬಂಡಿಯಲಿ ಭ್ರಮೆಯ ವೇಗದ ವಿಚಿತ್ರ ವಿಪರ್ಯಾಸ, ಮುನ್ನಡೆಯದ ಹಿಂಜರಿಯದ ಸ್ಥಗಿತತೆಯ ನಿಶ್ಚಲ ತ್ರಾಸ. ಉತ್ಕರ್ಷವಿಲ್ಲದ ಪತನವಿಲ್ಲದ ತ್ರಿಶಂಕು ಸ್ವರ್ಗದ ತೂಗುಯ್ಯಾಲೆ, ಜಡತ್ವವನ್ನೇ ಅಪ್ಪಿಕೊಂಡು ನಿಶ್ಚಲತೆಯೇ ಆಗಿದೆ ಸಂಗಾತಿ. ಅದೃಶ್ಯ ಅನಿವಾರ್ಯತೆಯ ಬೆನ್ನೇರಿ ಸಾಗಿದ ವಿರಾಮವಿಲ್ಲದ ಪರಿಭ್ರಮಣೆ, 'ಎಲ್ಲಿ? ಯಾವಾಗ?' ಎಂಬ ಪೂರ್ಣವಿರಾಮದ ಸುಳಿವಿರದ ಅನ್ವೇಷಣೆ. ಉಸಿರು ಬಿಗಿಹಿಡಿದು ಸಾಗುವ ಅಜ್ಞಾತ ಪಥದಲಿ ಕರಗಿದೆ ಈ ಕ್ಷಣ, ಉತ್ತರವಿಲ್ಲದ ಯಕ್ಷಪ್ರಶ್ನೆಯಾಗಿ ಶೇಷವಾಗಿದೆ ಈ ಗತಿಹೀನ ಪಯಣ.
----------------------------------
ನೋಂದಣಿ ಐಡಿ : KPFS2-2311