ಸರಸ್ವತಿಯ ಪ್ರಾರ್ಥನೆ
ರಚನೆ : ಮೃತ್ಯುಂಜಯ ತೇಜಸ್ವಿ
----------------------------------
ಒಂದಕ್ಷರವ ಕೂಡ ಬರೆಯಲರಿಯೆನು ತಾಯೆ ಕಂದನಂತೆಯೆ ತಿಳಿದು ತಿದ್ದು ನನ್ನಯ ತೊದಲು ಮಂದಮತಿ ನಾನಮ್ಮ ಭಕ್ತಿಯಿಂ ಭಕ್ತನೊಲು ವಂದಿಪೆನು ಸರಸತಿಯೆ ಕೈ ಹಿಡಿದು ನೀ ಕಾಯೆ ರಸನಾಗ್ರದೊಳು ನೆಲೆಸು ವಿವಿಧ ಛಂದದಿ ನುಡಿಸು ರಸಭಾವ ಹೊಮ್ಮುವೊಲು ಲಲಿತ ಪದಗಳನಿತ್ತು ಪೊಸೆದಿಹೆ ಸುನೀತದೊಳು ಹಾಡೊಂದನೀ ಹೊತ್ತು ಕುಸುಮದೊಲು ಪದಕಿಟ್ಟು ಪೂಜಿಸುತಲಿಹೆ ಹರಸು ಮಂದಾನಿಲೋತ್ಸಾಹ ಲಲಿತ ರಗಳೆಗಳಂತೆ ಕಂದ ಷಟ್ಪದಿಯಂತೆ ವೃತ್ತಗಳು ಹಲವಂತೆ ಛಂದೋವತಂಸ ಸಾಂಗತ್ಯದೊಳು ಬರೆವಂತೆ ಛಂದಸ್ಸು ನನಗಿಷ್ಟು ಕಲಿಸು ಶಾರದೆ ಮಾತೆ ಭಾವಾಬ್ಧಿಯೊಳು ತೇಲುತಿದೆ ಪದ್ಯದೀ ನಾವೆ ಹೇ ವಿಶಾರದೆ ನಿನಗೆ ನೀಡಲುತ್ಸವ ಸೇವೆ
----------------------------------
ನೋಂದಣಿ ಐಡಿ : KPFS2-9701