ನನ್ನ ನಾಳೆಗಾಗಿ ದುಡಿದವ
ರಚನೆ : ನಂದಿನಿ ಪ್ರಮೋದ್
----------------------------------
ಅಂಗಿ ಕಾಲರಿನಲ್ಲಿ ಕರಗಿ ಉಳಿದ ಕಲೆಗಳೆಷ್ಟೋ ತೂತು ಬಿದ್ದ ಬನಿಯನ್ಗಳಷ್ಟೇ ಮಾತಾಡಿವೆ ಅಪ್ಪ ಬೆವರ ಮಳೆಯ ಹೊಳೆಗೆ ಅಣೆಕಟ್ಟು ಸಾಲದು ನಿನ್ನಲ್ಲಿ ಬೀಡು ಬಿಟ್ಟ ನೋವುಗಳು ಬಿಕ್ಕಳಿಸಿವೆ ಅಪ್ಪ ಕಟ್ಟುಮಸ್ತಾಗಿದ್ದ ನಿನ್ನಾ ದೇಹವಿಂದು ಸಿಮೆಂಟಿನ ದೂಳೊಳಗೆ ಬೆಂದು ಕರಗಿದೆ ಅಪ್ಪ ಹಿಂಗಾಲಿನಿಂದ ಮುಂಗಾರು ಮಳೆಯಂತೆ ಸುರಿದ ನೆತ್ತರಿನ ಗಾಯಗಳೆಷ್ಟಿವೆ ನೋಡಪ್ಪ ಹಳೆ ಪ್ರೇಯಸಿಯಂತೆ ಬಿಡದೆ ಕಾಡುವ ಬಾಳೆ ಮಂಡಿಯಲ್ಲಿ ಮುರಿದ ಮಂಡಿಯ ನೋವು ಹೇಗಿದೆ ಅಪ್ಪ ಶರ ವೇಗದಿ ನಮ್ಮೂರ ಬೆಟ್ಟವತ್ತಿಳಿಯುತ್ತಿದ್ದೆ ಈಗೀಗ ಹತ್ತೆಜ್ಜೆ ಇಟ್ಟರೆ ಏಕೆ ನರಳುವೆ ಅಪ್ಪ ನೋವುಗಳನ್ನೇ ನನಗೆ ಪರಿಚಯಿಸದ ನಿನಗೆ ಬಾಳಿನುದ್ದಕ್ಕೂ ಜೀತದಾಳಿನಂತಿರುವೆ ಅಪ್ಪ
----------------------------------
ನೋಂದಣಿ ಐಡಿ : KPFS2-8444