ಅನಕ್ಷರಸ್ಥ ಕವಿ
ರಚನೆ : ಸೋಮಶೇಖರ್ ಎಸ್
----------------------------------
ಕವಿಯಾಗಬೇಕೇನು ನೀನು ಕವಿಯಾಗಬೇಕೇನು? ಕವನಗಳ ರಚಿಸಲು ಕವಿಯೇ ಆಗಬೇಕೇನು? ಓದುಬರಹವಿಲ್ಲ ವೆನಗೆ,ಛಂದಸ್ಸು ವ್ಯಾಕರಣಗಳ ಅರಿವಿಲ್ಲದವನು!ನಾ ಹೇಗೆ ಕವಿಯಾಗಬಲ್ಲೆನೆಂದು ಕೊರಗುತಿರುವೆಯೇನು? ಹಾಡುವ ಕೋಗಿಲೆಗೆ ರಾಗಲಯ ತಾಳಗಳ ಅರಿವಿರುವುದೇನು?ನರ್ತಿಸಿ ನಲಿಯುವ ನವಿಲದು ನೃತ್ಯಭಂಗಿಗಳ ಅಭ್ಯಸಿಸಿಯೇ ಕುಣಿವುದೇನು?ಹೂವಿನ ಮಕರಂದವ ಸವಿಯಲು ದುಂಬಿಗಾರಾದರೂ ಕಲಿಸಿಕೊಡಬೇಕೇನು?ಮನದಾಳದ ಮಾತುಗಳಿಗೆ ಅಕ್ಷರಗಳಿಂದಲೇ ಮುಕುತಿಯೇನು?ಅಮ್ಮನ ಜೋಗುಳಕ್ಕೆ, ಅಜ್ಜಮ್ಮನ ಪದಗಳಿಗೆ ಕಾಗುಣಿತದ ನಿಲುವೇನು?ಅಪ್ಪಯ್ಯನ ಅನುಭವಕ್ಕೆ,ನೇಗಿಲಯೋಗಿಯ ಗುನುಗಿಗೆ ಓದುಬರಹದ ಒಲವೇನು?ಇಳೆ ಮಳೆ ಬೆಳೆ ನದಿಗಳ,ಖಗಮೃಗ ಕೀಟದ ವಿಧಗಳ ಸೊಬಗನ್ನು,ಬಣ್ಣಿಸಿ ಕೊಂಡಾಡಲು ಮಾತೃಭಾಷೆಯ ತೊದಲು ಸಾಲದೇನು? ಕವಿಯಾಗಬೇಕೇನು ನೀನು ಕವಿಯಾಗಬೇಕೇನು?ಕವನಗಳ ರಚಿಸಲು ಕವಿ ಅಕ್ಷರಸ್ಥನೇ ಆಗಿರಬೇಕೇನು?
----------------------------------
ನೋಂದಣಿ ಐಡಿ : KPFS2-7554