ಕಳುವಾದ ಕನಸು
ರಚನೆ : ರಾಧಾ
----------------------------------
ಉಡಾವಣೆಗೈಯ್ಯಲಿರುವ ರಾಕೆಟ್ ನಂತಿರುವುದು ನೀನು ಶಾಲೆಗೆ ಅಣಿಯಾಗುವ ಪರಿ. ಕನಸ ಕಣ್ಣು ತೆರೆಯುತ, ಇದ್ದಲ್ಲಿಂದಲೇ ಸುತ್ತಲಿನ ಮಣ್ಣ ಪ್ರಪಂಚವ ಆಲಂಗಿಸುತ ಏಳುವೆ ನಿನ್ನ ನಿರ್ಮಲ ಕಂಗಳಲಿ ಕರಗುತಿರುವುದು ಸ್ವಪ್ನಗಳ ರಾಶಿ, ದಿನವೂ ರಾತ್ರಿ ದಿಂಬಿನ ಅಡಿ ಉಸಿರುಗಟ್ಟಿಸಿಡುವ ಆ ಪುಟ್ಟ ಕೆಂಪು ಕಾರು ಮತ್ತು ಸಂಗಡಿಗರ ಸುತ್ತಲೂ ಚೆಲ್ಲಿರುವುದು ನಿನ್ನ ಕನಸು. ಬಚ್ಚಲು ಮನೆಯ ಬಿಸಿ ನೀರಿನ ಶಾಖಕ್ಕೆ ಆವಿಯಾಗದಂತೆ ಹಿಡಿದಿಟ್ಟ ಕನಸ, ಯುನಿಫಾರ್ಮ್ ತೊಟ್ಟು,ಚಕಳ ಬಕಳ ಕೂತು ತಿಂಡಿಯೊಂದಿಗೆ ಹರವಿಕೊಳ್ಳಲಾಗದೆ ನುಂಗಿ ರಾಕೆಟಿನಂತೆ ಶಾಲೆಯ ಬಸ್ ಏರುವೆ ಸೋರಿದ ನಿನ್ನ ಅಷ್ಟೂ ಕನಸನ್ನ, ಗೊಡೆಗೆ ಜೋತು ಬಿದ್ದ ಪೇಟೆಯ ಕ್ಯಾಲೆಂಡರ್ ನಿರಾಯಾಸವಾಗಿ ತನ್ನೊಡಲ ಗರ್ಭಕೆ ಬಾಚಿಕೊಂಡಿದೆ.
----------------------------------
ನೋಂದಣಿ ಐಡಿ : KPFS2-6660