ಮುಸ್ಸಂಜೆ ಗೆಳತಿ
ರಚನೆ : ಪರಶುರಾಮ ಕೆ
----------------------------------
ಇನ್ನೇನು ಹೊತ್ತು ಮುಳುಗುವ ವೇಳೆಯಾಯಿತು, ನೀ ಬರುವ ಸುಳಿವು ಸಿಕ್ಕಾಯಿತು ಬಂದೊಡನೆ,ತಂಪಾದ ನಿನ ಸ್ಪರ್ಶದಿ ಓಲೈಸು ನನ್ನನು. ಇಂಪಾದ ನಿನ್ನುಸಿರ ಸದ್ದಲೆ ಸಂತೈಸು ನನ್ನನು, ಕೆಂಬಣ್ಣದ ನೇಸರನ ನೋಡೋಮ್ಮೆ ಅವನಿಗೂ ಮಡದಿಯ ನೋಡುವ ಸಡಗರ. ಎಗ್ಗಿಲ್ಲದೆ ಹಾರುತಿರುವ ಹಕ್ಕಿ ಸಾಲುಗಳಿಗೆ ದೂರದ ಗೂಡು ಸೇರುವ ಅವಸರ. ಇಡೀ ರಾತ್ರಿಈಡೇರದ ಕನಸುಗಳೆಲ್ಲವ ಹೊತ್ತು ಮಾರೋಣ, ಆಗಸದಿ ಮಿನುಗೋ ತಾರೆಗಳಿಗೆರಡು ಕನಸ ಸಾಲ ಕೊಟ್ಟು ಬರೋಣ. ಹೊಳೆ ದಂಡೆ ಮರಳ ಮೇಲೆ ಕೈ ಬೆರಳ ಕುಂಚದಲಿ ನನ್ನನೆ ಚಿತ್ರಿಸುತ್ತಿರು ನೀನು, ಅಲೆಗಳ ನೆಪದಲಿ ನಿನ್ನ ಪಾದವ ತಾಕುತಿರುವ ನೀರಿಗೊಂದು ಗತಿ ಕಾಣಿಸಿ ಬರುವೆ ನಾನು. ಮಂಡಿಯೂರಿ ಕೊಂಚ ಸಹಕರಿಸು,ಮಿಂಚು ಹುಳುಗಳ ಮಾಲೆ ಮಾಡಿ ಮುಡಿಸುವೆನು, ಕಾಲ್ಚೈನ ಗೆಜ್ಜೆಯನು ಮೀನೋಂದು ಕದ್ದೊಯ್ದಿದೆ, ಸ್ವಲ್ಪ ವಿರಮಿಸು ಈಗಲೇ ತಂದು ಪೊಣಿಸುವೆನು. ಯಾರ ಹಂಗಿಲ್ಲದೆ ಕರಿ ಕಂಬಳಿ ಹೊದ್ದು ಮಲಗಿರುವ ಡಾಂಬರು ರಸ್ತೆಗಳ ಬಡಿದೆಬ್ಬಿಸುವ, ನಡು ರಾತ್ರಿ ಸುಖ ಸುಮ್ಮನೆ ಗೀಳಿಡುವ ಶ್ವಾನಗಳ ಸಾಲಾಗಿ ಕೂರಿಸಿ ಪ್ರೇಮ ಪಾಠ ಹೇಳುವ. ಬೆಳಕು ಹರಿಯುವ ಮುನ್ನ ನಮ್ಮ ನಮ್ಮ ಮನೆಗಳ ಸೇರೋಣ,ಮತ್ತೆ ಸಂಜೆ ಸಿಗೋಣ
----------------------------------
ನೋಂದಣಿ ಐಡಿ : KPFS2-6235