ತಾಯಿ (ವಾರ್ಧಕ ಷಟ್ಪದಿ)
ರಚನೆ : ಚಿನ್ಮಯ ಅನಂತ ಹೆಗಡೆ ದಂತಳಿಗೆ
----------------------------------
ಸರಸಿಜಾಸನ ಪಿತನ ಸಖನ ಸುತನಿಂಗೆ ನಾ | ವಿರಚಿಪೆನು ಮೊದಲಾಗಿ ವಂದನೆಯ ತಲೆಬಾಗಿ | ಮುರರಿಪುಗೆ ಮಾರಾರಿಗಭಿನಮಿಸಿ ವಾಗ್ದೇವಿ ಕರುಣದಿಂದಾನು ರಚಿಪೆ || ಧರೆಯ ದೇವರು ತಾಯಿಯವಳ ಮಡಿಲೊಳು ನಗುತ | ಲಿರುವ ಸೌಭಾಗ್ಯ ದೊರಕಿರಲದುವೆ ಧನ್ಯತೆಯ | ವರವೆಮ್ಮ ಸುಂದರದ ಜೀವನಕ್ಕದನುಳಿದು ಮತ್ತೇನು ಬೇಕು ಜಗದಿ || ೧ || ಜನನಿಯಳ ಮಡಿಲದಾ ಸ್ವರ್ಗಕೂ ಮಿಗಿಲಹುದು | ಎನುವುದನ್ನೆಂದಿಗೂ ಮರೆಯದೆಯೆ ಜೀವಿಸೆಂ | ದೆನುವೆ ನಾ ಭಕ್ತಿಯಿಂ ಮಾತೆಯಾ ಪರಮ ಪದಯುಗ್ಮಜಂಗಳಿಗೆ ನಮಿಸಿ || ಅನುಪಮಳಿಗನುನಯದೊಳನವರತ ವಂದಿಸುತ | ಲನುದಿನದಿ ಜೀವನದಿ ಜಯಲಕ್ಷ್ಮಿಯೊಲಿಯಲೆಂ | ದೆನುವನುಗ್ರಹ ಪಡೆದರೆಮ್ಮಯೀ ಜನುಮ ಸಾರ್ಥಕವಹುದು ವಸುಧೆಯಲ್ಲಿ || ೩ ||
----------------------------------
ನೋಂದಣಿ ಐಡಿ : KPFS2-6092