ನಿಜ ಬಿಂಬ
ರಚನೆ : ಬಾಲಾಜಿ. ಆರ್
----------------------------------
ದಿನ ದಿನವು ಗರಿಗೆದರಿದ ನವಿಲ ಮರಿಯ ಚೆಂದವ ಕಂಡು ಸವಿದವರೆಷ್ಟೋ! ರೆಕ್ಕೆಗಳ ಕಡಿದು ನೆಲಕ್ಕುರುಳಿಸಿ ಚೀರಾಡಿದ ರೆಕ್ಕೆಗಳು ಪಟಪಟನೆ ಒದರಿ ತಣ್ಣಗಾದವು; ಬೀದಿ ನಾಯಿಗಳ ಪಾಲಾದವು. ಒಳ ಹೊರಗೆಲ್ಲ ಮೌನ ಧ್ಯಾನವ ಪಾಠ ಕಲಿಸಿ ಬೆನ್ನತಟ್ಟಿ ಕಣ್ಣು ಕಟ್ಟುವ ಕೈಗಳಿಗೆ ತೀರದ ದಾಹ ಕುಣಿವ ನವಿಲ ಪುಕ್ಕ ಕಿತ್ತಿಟ್ಟು ಮಾಂಸದಂಗಡಿಯಲಿ ತೂಗಾಕಿದಾಗ ಬಾಲೆಯರ ಕೆಂಪು ಬಟ್ಟೆಗಳ ಮೇಲೆ ಕುಣಿವ ನವಿಲಿನ ಚಿತ್ರದ ರಂಗು. ವಿಲಕ್ಷಣ, ವಿಕೃತ ಪ್ರತಿಬಿಂಬಗಳು ಕನ್ನಡಿಯೊಳಗೆ ಕುಣಿದಾಟ ನಡೆಸಿವೆ ಆಕಾರವ - ವಿಕಾರವ ಮಾಡಿ ಎದುರಿಸುತ್ತಿದೆ ತನ್ನದೇ ಬಿಂಬ. ಹೊಡೆದರೆ ಚೂರು ಚೂರು ಗುಂಪುಗಟ್ಟಿ ಮುತ್ತಿವೆ ಕನ್ನಡಿಯೂ ಮರೆಮಾಚುತಿದೆ ನಿಜ ಬಿಂಬವ.
----------------------------------
ನೋಂದಣಿ ಐಡಿ : KPFS2-6075