Submission 4802

ಬಾಳಿನ ನಾಟಕ

ರಚನೆ : ಗೋಪಾಲ ನಾಯ್ಕ್

----------------------------------

ಜಗವೊಂದು ಹಿರಿ ಬಯಲು ಇಲ್ಲಿ ಪ್ರತಿದಿನವೂ ಸಂತೆ ಹಗಲಿರುಳೂ ಇಲ್ಲಿ ನಡೆಯುತ್ತದೆ ಬಗೆಬಗೆಯ ಕೂಗಾಟ ಮಾರಾಟ ಕೊಟ್ಟು ಕೊಳ್ಳುವರುಂಟು‌‌ ಪಡೆದು ಕೊಟ್ಟವರು ಉಂಟು ಏನೊಂದೂ ಪಡೆಯದೇ ಕೊಟ್ಟು ಹೋದವರುಂಟು. ಕನಸು ಮಾರುವರುಂಟು ಮನಸು ಕದ್ದವರುಂಟು ತನಗೇನು ಬೇಕೆಂಬುದ ಅರಿಯದವರುಂಟು.. ಗೂಳಿಗಳ ಕಾಳಗವುಂಟು ಕೋಳಿ ಜಗಳವೂ ಉಂಟು ತಾಳ ಮೇಳಗಳು ಬೆರೆತ ಬಾಳ ನಾಟಕವು ಉಂಟು. ಬಾಯಿ ಚಪ್ಪರಿಸಲು ಹಲವು ವಿಷಯ ಖಾದ್ಯಗಳಿಲ್ಲುಂಟು ಕೇಳಿ ತಣಿಯಲು ಬಲ್ಲವರ ಹಿತಬುಡಿಗಳ ವಾದ್ಯವುಂಟು ದುಡ್ಡಿಗಾಗಿ ತಮ್ಮತನವ ಮಾರಿಕೊಳ್ಳುವವರುಂಟು ಕಾರಣವಿಲ್ಲದೇ ಪರರ ಮಾನ ಹರಾಜು ಹಾಕುವವರುಂಟು. ಅಲೆಮಾರಿಗಳು ಉಂಟು ನೆಲೆ ನಿಂತವರು ಉಂಟು ಕಲೆಯ ಬಲ್ಲವರುಂಟು ಬಲೆ ಹೆಣೆಯುವರುಂಟು ಬೇಕಾದ್ದು ಬೇಡವಾದದ್ದು ಎಲ್ಲ ಈ ಸಂತೆಯೊಳುಂಟು...

----------------------------------

ನೋಂದಣಿ ಐಡಿ : KPFS2-8381

10
Votes
202
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top