ಕನ್ನಡ ನಾಡಿನ ಚಿಣ್ಣರ ಗೀತೆ
ರಚನೆ : ಡಾ. ಸತೀಶ ನಾಯಕ್ ಆಲಂಬಿ
----------------------------------
ಬನ್ನಿರಿ ಮಕ್ಕಳೆ ನಮ್ಮಯ ನಾಡಿನ ಹೆಮ್ಮೆಯ ಭಾಷೆಯನಾಡೋಣ ತನ್ನಿರಿ ಮಕ್ಕಳೆ ನಿಮ್ಮಯ ಪುಸ್ತಕ ಕನ್ನಡ ಕವಿತೆಯ ರಚಿಸೋಣ ಸುಂದರ ಲಿಪಿಯನ್ನು ಹೊಂದಿಹ ಕನ್ನಡ ಭಾಷೆಯ ಹಂದರ ಕಟ್ಟೋಣ ಗಂಧದ ನಾಡಿನ ಚಂದದ ಭಾಷೆಯ ವಿಶ್ವದ ಎಲ್ಲೆಡೆ ಹರಡೋಣ ಸಂಧಿ ಸಮಾಸ ಛಂದೋಬಂಧದ ಹಿಂದುಮುಂದುಗಳನರಿಯೋಣ ಕಂದಪದ್ಯದ ಮಾತ್ರೆ ಗಣಗಳ ಸಿಂಧುಬಿಂದುವಲಿ ಮೀಯೋಣ ರನ್ನ ಪಂಪರ, ಪೊನ್ನ ಜನ್ನರ, ರಾಘವಾಂಕರ ನೆನೆಯೋಣ ಭಿನ್ನ ಕಾವ್ಯದ ಕವಿ ಮುದ್ದಣ್ಣ, ಉನ್ನತ ದಾಸರ ಸ್ಮರಿಸೋಣ ನವ್ಯಕನ್ನಡ, ಹಳೆಯ ಕನ್ನಡ, ಕಾವ್ಯಕನ್ನಡವನರಿಯೋಣ ಭವ್ಯ ಚರಿತ್ರೆಯ ದಿವ್ಯ ಗ್ರಂಥಗಳ ಅವ್ಯಾಹತದಲಿ ಓದೋಣ ಹಲವು ಭಾಷೆಗಳ ಕಲಿಯೋಣ, ಬೆಳೆದು ಎಲ್ಲರನು ತಿಳಿಯೋಣ ಉಳಿದ ಭಾಷೆಗಳ ಹೀಯಾಳಿಸದೆ ಚೆಲುವ ಕನ್ನಡವ ಬೆಳೆಸೋಣ
----------------------------------
ನೋಂದಣಿ ಐಡಿ : KPFS2-8470