ಯಾಯಾವರ
ರಚನೆ : ಸೀತಾರಾಮ್ ಕಟ್ಟಿ
----------------------------------
ಗಾವುದದ ಅಳತೆಯಲಿ ಜೀವನವನಳೆದು ಸಾಗುತಿದೆ ದಿಗ್ಗೇಡಿ ತಿಳಿಗೇಡಿ ಪಯಣ ಜೊತೆಯಲ್ಲಿ ಮಣ್ದಾರಿ, ಹುಲ್ಲುಹದಿ ಅರಣಗಳು ಗೆಳೆತನಕೆ ಸಂಧ್ಯೆ ಉಷೆ ನಿಶೆ ಮತ್ತು ಅರುಣ ಕಾಲಚಕ್ರದ ಮೇಲೆ ಹತ್ತಿ ಚಾರಣ ನಡೆಸು ನಿಲ್ಲದಿರು ನಿಲ್ಲದಿರು ಯಾಯಾವರ .. ದಾರಿ ಅಲ್ಲೇ ಇಹುದು ಹಗಲಿರಲಿ ಇರುಳಿರಲಿ ದಾರಿಹೋಕರ ದಾರಿ ಬದಲಾಯಿತು ನದಿಯು ಹರಿಯುತಲಿಹುದು ಯುಗದ ಆ ಮೂಲೆಯಿಂ ದಂಡೆಗಳ ಮುಖಗವುಸು ಬದಲಾಯಿತು ಜೀವಿತದ ಭಾವಿತದ ವ್ಯತಿರೇಕತೆಯನರಿತು ನಿಲ್ಲದಿರು ನಿಲ್ಲದಿರು ಯಾಯಾವರ ತಿರುಗುತ್ತಲೇ ಇಹುದು ಮುಳ್ಳು ಗಡಿಯಾರದಲಿ ಕ್ಷಣಗಳೋ ಉದುರುದುರಿ ಹಬೆಯಾದವು ಅನುಭವದ ಹೆಗ್ಗಂಟು ಕೇಶಗಳ ಬೆಳ್ಳಿತನ ನಿಲವಿನ ಚೆಲುವಿಕೆಯ ಪ್ರಭೆಯಾದವು ಚರತತ್ವ ಪರತತ್ವ ವ್ಯತಿರೇಕತೆಯನರಿತು ನಿಲ್ಲದಿರು ನಿಲ್ಲದಿರು ಯಾಯಾವರ
----------------------------------
ನೋಂದಣಿ ಐಡಿ : KPFS2-7575